ಕ್ಯಾಲ್ಡೀಯ ಸಾಮ್ರಾಜ್ಯ
ಇರಾಕಿನ ದಕ್ಷಿಣದಲ್ಲಿ ಪರ್ಷಿಯನ್ ಖಾರಿಯ ತೀರದಲ್ಲಿ ಕ್ರಿ.ಪೂ. 1ನೆಯ ಸಹಸ್ರಮಾನದ ಪೂರ್ವಾರ್ಧದಲ್ಲಿ ಪ್ರಬಲರಾಗಿದ್ದ ಸೆಮಿಟಿಕ್ ಜನರ ರಾಜ್ಯ. ಬೈಬಲ್ ಗ್ರಂಥದ ಹಳೆ ಒಡಂಬಡಿಕೆಯಲ್ಲಿ ಕ್ಯಾಲ್ಡೀಯ ಮತ್ತು ಕ್ಯಾಲ್ಡೀಯನರನ್ನು ಕ್ರಮವಾಗಿ ಬ್ಯಾಬಿಲೋನಿಯ ಮತ್ತು ಬೆಬಿಲೋನಿಯನರೆಂದು ಸಂಬೋಧಿಸಲಾಗಿದೆ. ಕ್ಯಾಲ್ಡೀಯನರ ಮೂಲನಿವಾಸದ ಗಡಿ ರೇಖೆಗಳನ್ನು ಸ್ಪಷ್ಟವಾಗಿ ಗುರುತಿಸುವುದು ಇನ್ನೂ ಸಾಧ್ಯವಾಗಿಲ್ಲ. ಆದರೆ ಯುಫ್ರೇಟೀಸ್ ಮತ್ತು ಟೈಗ್ರಿಸ್ ನದೀಮುಖಗಳ ಅಂದಿನ ವಿಸ್ತಾರವಾದ ಮೆಕ್ಕಲು ಪ್ರದೇಶದಲ್ಲಿ ಕ್ಯಾಲ್ಡೀಯನರು ವಾಸವಾಗಿದ್ದರೆಂದು ಸ್ಥೂಲವಾಗಿ ಹೇಳಬಹುದು. ಇವರು ಬಹುಶಃ ಸೆಮಿಟಿಕ್ ಜನಾಂಗದ ಮೂಲ ಸ್ಥಳವಾದ ಅರೇಬಿಯದಿಂದ ಬಂದವರೆಂದೂ, ಆರ್ ಪ್ರದೇಶದ ಸುತ್ತಮುತ್ತ ನೆಲಸಿದರೆಂದೂ ಅಭಿಪ್ರಾಯಪಡಲಾಗಿದೆ. ಬಿಟ್ ಯಕಿನ್ ಇವರ ಪುರಾತನ ರಾಜಧಾನಿ. ಮೊತ್ತಮೊದಲಿಗೆ ಕ್ರಿ.ಪೂ. 884-859ರಲ್ಲಿ ಅಸ್ಸಿರಿಯದ ದೊರೆ ಅಷುರ್ ಬನಿಪಾಲನ ಕಾಲದ ದಾಖಲೆಗಳಲ್ಲಿ ಕ್ಯಾಲ್ಡೀಯನರ ವಿಷಯ ಕಂಡುಬರುತ್ತದೆ. ಕ್ರಿ.ಪೂ.850ರಲ್ಲಿ 3ನೆಯ ಷಾಲ್ಮನೆಸೆರ್ ಈ ಪ್ರದೇಶವನ್ನು ಆಕ್ರಮಿಸಿಕೊಂಡಿದ್ದ. ಪುನಃ ಇದು ಸ್ವತಂತ್ರವಾಯಿತು. ಅನಂತರ ಬಂದ 5ನೆಯ ಷಂಷಿ-ಅಂಡಾಡ್, 3ನೆಯ ಅಡಾಡ್-ನಿರಾರಿ (ಕ್ರಿ.ಪೂ.ಸು.810), 3ನೆಯ ತಿಗ್ಲಾತ್-ಪಿಲೆಸೆರ್ (ಕ್ರಿ.ಪೂ.745-727) ಇವರು ಪುನಃಪುನಃ ಇವರನ್ನು ಗೆದ್ದರೂ ಪ್ರಯೋಜನವಾಗಲಿಲ್ಲ. 2ನೆಯ ಸಾರಗಸನ ಕಾಲದಲ್ಲಿ ಮಿರೊಡಾಕ್-ಬಲಾಡನ್ ಎಂಬ ಕ್ಯಾಲ್ಡೀಯನ್ ವೀರ ಅಲ್ಲಿಯ ನಾಯಕನಾಗಿ 10 ವರ್ಷಗಳ ಕಾಲ (ಕ್ರಿ.ಪೂ.721-710) ಸ್ವತಂತ್ರವಾಗಿ ಆಳಿದ. ಅವನು ಅಸ್ಸಿರಿಯದ ರಾಜರಾಗಿದ್ದ ಸಾರ್ಗನ್ ಮತ್ತು ಸೆನ್ನಾಚೆರಿಬ್‍ರ ವಿರುದ್ಧ ಹೋರಾಡುತ್ತಿದ್ದುದಲ್ಲದೆ ಜುಡಾ ರಾಜ್ಯವನ್ನು ಅವರ ವಿರುದ್ಧ ಎತ್ತಿಕಟ್ಟಲು ಪ್ರಯತ್ನಿಸಿದ. ಕ್ರಿ.ಪೂ. 710ರಲ್ಲಿ ಆತ ಸೋತರೂ ಹೋರಾಟವನ್ನು ಬಿಡದೆ ಮುಂದುವರಿಸಿ, ಕ್ರಿ.ಪೂ. 703-02ರಲ್ಲಿ ಮತ್ತೆ ಸ್ವಾತಂತ್ರ್ಯ ಗಳಿಸಿದ. ಆದರೆ ಕಡೆಗೂ ಆತ ಸೋತು ಓಡಿಹೋಗಬೇಕಾಯಿತು. 

ಅಸ್ಸಿರಿಯ ಸಾಮ್ರಾಜ್ಯದ ಅವನತಿಯ ಅನಂತರ ಸ್ಥಳೀಯ ಪ್ರಾಂತ್ಯಾಧಿಕಾರ ನಬೊಪೊಲಸ್ಸಾರನಿಂದ ಕ್ಯಾಲ್ಡೀಯನರ ಪ್ರಭಾವ ಹೆಚ್ಚಿತು. ಆತ ಕ್ರಿ.ಪೂ. 626ರಲ್ಲಿ ಬ್ಯಾಬಿಲೋನಿಯದ ದೊರೆಯಾದ. ಅವನ ವಂಶಜರು ಕ್ರಿ.ಪೂ.539ರಲ್ಲಿ ಪರ್ಷಿಯನ್ ಆಕ್ರಮಣವಾಗುವವರೆಗೂ ಆಳಿದರು. ಅವರಲ್ಲಿ ಪ್ರಮುಖನೆಂದರೆ ನೆಬು ಚಡ್ರೆಸಾóರ್ (ಕ್ರಿ.ಪೂ.605-562). ಅವನು ಈಜಿಪ್ಟಿನಿಂದ ಪರ್ಷಿಯದ ಪಶ್ಚಿಮ ಭಾಗದವರೆಗೂ ಸಾಮ್ರಾಜ್ಯವನ್ನು ವಿಸ್ತರಿಸಿದ. ಅವನ ಅನಂತರ ಬಂದ ನಬೊನಿಡಸ್ ಶಕ್ತನಾಗಿರಲಿಲ್ಲ (ಕ್ರಿ.ಪೂ.556-539). ಕ್ರಿ.ಪೂ.539ರಲ್ಲಿ ಪರ್ಷಿಯದ ಸಾಮ್ರಾಟ ಸೈರಸ್ ಮಹಾಶಯ ಬ್ಯಾಬಿಲೋನಿಯವನ್ನೂ (ಕ್ಯಾಲ್ಡೀಯ ಸಾಮ್ರಾಜ್ಯವೂ ಸೇರಿ) ಗೆದ್ದು ಕ್ಯಾಲ್ಡೀಯನರ ಸ್ವಾತಂತ್ರ್ಯವನ್ನು ಕೊನೆಗಾಣಿಸಿದ.

ಕಣ್ಮರೆಯಾಗುತ್ತಿದ್ದ ಬ್ಯಾಬಿಲೋನಿಯದ ಸಂಸ್ಕøತಿಯನ್ನು ಪುನರುಜ್ಜೀವನಗೊಳಿಸಿದ ಕ್ಯಾಲ್ಡೀಯನ್ ಅರಸರು ವಿಶ್ವದ ಏಳು ಅದ್ಭುತಗಳಲ್ಲಿ ಸೇರಿದ ತೂಗುವ ಉದ್ಯಾನಗಳು (ಹ್ಯಾಂಗಿಂಗ್ ಗಾರ್ಡನ್ಸ್) ಮತ್ತು ಬೇಬಲ್ ಗೋಪುರಗಳ ನಿರ್ಮಾತರು. ನೆಬ್ರು ಚೆಡ್ರೆಸಾóರನ ಅರಮನೆ ಆ ಕಾಲದ ವಾಸ್ತು ಕೃತಿಗಳಲ್ಲಿ ಅಪೂರ್ವ. ಅಲ್ಲಿಯ ಹೊಳಪುಹೆಂಚುಗಳ ಅಲಂಕರಣ ಅಮೋಘ, ವಿಶ್ವನಾಗರಿಕತೆಯ ಇತಿಹಾಸದಲ್ಲಿ ಅವರ ಸ್ಥಾನ ಶಾಶ್ವತವಾದ್ದು. 						 (ಬಿ.ಎಸ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ